ಏಳು ವರ್ಷಗಳ ಯುದ್ಧ: 1756-1763. ಫ್ರಾನ್ಸ್‌, ಆಸ್ಟ್ರಿಯ, ರಷ್ಯ, ಸ್ಯಾಕ್ಸನಿ, ಸ್ವೀಡನ್ ಮತ್ತು (1762ರಿಂದ) ಸ್ಪೇನ್ ಇವುಗಳಿಗೂ ಪ್ರಷ್ಯ, ಇಂಗ್ಲೆಂಡ್ ಮತ್ತು ಹ್ಯಾನೊವರ್ಗಳಿಗೂ ನಡುವೆ, ಯುರೋಪ್, ಉತ್ತರ ಅಮೆರಿಕ ಮತ್ತು ಭಾರತ ಕ್ಷೇತ್ರಗಳಲ್ಲಿ ನಡೆದ ಜಾಗತಿಕ ಯುದ್ಧ (ಸೆವೆನ್ ಇಯರ್ಸ್‌ ವಾರ್). ಇದಕ್ಕೆ ಕಾರಣಗಳು ಸ್ಥೂಲವಾಗಿ ಎರಡು. ಉತ್ತರ ಅಮೆರಿಕದಲ್ಲೂ ಭಾರತದಲ್ಲೂ ವಸಾಹತಿಗಾಗಿ ಫ್ರೆಂಚರಿಗೂ ಇಂಗ್ಲಿಷರಿಗೂ ನಡುವೆ ನಡೆದಿದ್ದ ಸ್ಪರ್ಧೆ ಒಂದು ಮುಖ್ಯಕಾರಣ. ಅಮೆರಿಕದಲ್ಲಿ ಇಂಗ್ಲಿಷರು ಅಲಿಘನಿ ಪರ್ವತಗಳನ್ನು ದಾಟಿ ಪಶ್ಚಿಮಾಭಿಮುಖವಾಗಿ ಪದಾಕ್ರಮಣ ಮಾಡುತ್ತಿದ್ದಾಗ ಫ್ರೆಂಚರು ಕೆನಡದಿಂದ ನೈಋತ್ಯಾಭಿಮುಖವಾಗಿ ನಡೆಯುತ್ತ ಇಂಗ್ಲಿಷರ ಹಾದಿಯಲ್ಲಿ ಅಡ್ಡಹಾಯ್ದದ್ದರಿಂದ ವಿರಸಕ್ಕೆ ಆಸ್ಪದವುಂಟಾಯಿತು. ಜರ್ಮನಿಯ ಅಧಿನಾಯಕತ್ವಕ್ಕಾಗಿ ಆಸ್ಟ್ರಿಯದ ಮೇರಿಯಾಥೆರೀಸಗೂ ಪ್ರಷ್ಯದ ಎರಡನೆಯ ಫ್ರೆಡರಿಕನಿಗೂ ನಡುವೆ ವಿರಸವೇರ್ಪಟ್ಟದ್ದೂ ಯುದ್ಧಕ್ಕೆ ಕಾರಣವಾಯಿತು. ಆಸ್ಟ್ರಿಯದ ಉತ್ತರಾಧಿಕಾರದ ನಡೆದ ಯುದ್ಧ ಯುದ್ಧಕ್ಕೆ ಕಾರಣವಾಯಿತು. ಆಸ್ಟ್ರಿಯದ ಉತ್ತರಾಧಿಕಾರದ ಬಗ್ಗೆ ನಡೆದ ಯುದ್ಧ 1748ರಲ್ಲಿ ಕೊನೆಗೊಂಡಿತ್ತಾದರೂ ಅನಂತರದ ವರ್ಷಗಳಲ್ಲೂ ದ್ವೇಷದ ಹೊಗೆಯಾಡುತ್ತಲೇ ಇತ್ತು. ಯುರೋಪಿನಲ್ಲಿ ಯಾರು ಹೆಚ್ಚು ಬಲಿಷ್ಠರು ಎಂಬ ಬಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂಬ ಚಪಲ ಬೆಳೆಯುತ್ತಿತ್ತು. ತಾನು ಹಿಂದಿನ ಯುದ್ಧದಲ್ಲಿ ಕಳೆದುಕೊಂಡಿದ್ದ ಸೈಲೀಷಿಯ ಪ್ರಾಂತ್ಯವನ್ನು ಮರಳಿ ಪಡೆಯಬೇಕೆಂಬುದು ಆಸ್ಟ್ರಿಯದ ಹಂಬಲವಾದರೆ ಅದನ್ನು ತಾನೇ ಉಳಿಸಿಕೊಂಡು ಆಸ್ಟ್ರಿಯವೇ ಮುಂತಾದ ನೆರೆರಾಷ್ಟ್ರಗಳ ಹಮ್ಮನ್ನು ಮುರಿಯಬೇಕೆಂಬುದು ಪ್ರಷ್ಯದ ಆಕಾಂಕ್ಷೆ. ರಾಜಕಾರ್ಯ, ಯುದ್ಧವಿದ್ಯೆ ಎರಡರಲ್ಲೂ ಅಸಾಧಾರಣ ಪ್ರತಿಭೆ ಹೊಂದಿದ್ದ ಫ್ರ್ರೆಡರಿಕ್ ಆಗ ಪ್ರಷ್ಯದ ದೊರೆಯಾಗಿದ್ದ, ಪುರ್ವದಲ್ಲಿ, ಹದಿನೆಂಟನೆಯ ಶತಮಾನದವರೆಗೂ, ತೀರ ಹಿಂದುಳಿದಿದ್ದ ರಷ್ಯ ಈಗ ಗಣನೀಯ ಪ್ರಗತಿ ಹೊಂದಿ ಇತರ ರಾಷ್ಟ್ರಗಳ ಮೇಲೆ ತನ್ನ ಪ್ರಭಾವ ಬೀರಲು ಪ್ರಾರಂಭಿಸಿತ್ತು. ಹೀಗಾಗಿ ಒಂದು ಕಡೆ ಇಂಗ್ಲೆಂಡ್ ಮತ್ತು ಪ್ರಷ್ಯ ಇವೂ ಇನ್ನೊಂದು ಕಡೆ ಆಸ್ಟ್ರಿಯ, ಫ್ರಾನ್ಸ್‌ ಇವೂ ಇದ್ದ ಎರಡು ಬಣಗಳೇರ್ಪಟ್ಟಿದ್ದುವು.
ಸೈಲೀಷಿಯವನ್ನು ಪುನಃ ಪಡೆಯಬೇಕೆಂಬ ನಿರ್ಧಾರದಿಂದ ಆಸ್ಟ್ರಿಯದ ರಾಣಿ ಮೇರಿ ಯೂಥೆರೀಸ ತನ್ನ ದೇಶದ ಉತ್ತರ ಗಡಿಯಲ್ಲಿ ಸೈನ್ಯಸಂಗ್ರಹ ಮಾಡುತ್ತಿದ್ದಾಳೆಂಬ ನೆಪ ಹೂಡಿ, ಫ್ರೆಡರಿಕ್ 1756ರಲ್ಲಿ ಸ್ಯಾಕ್ಸನಿಯನ್ನಾಕ್ರಮಿಸಿದ. ಫ್ರಾನ್ಸಿನಿಂದೊದಗಬಹುದಾದ ಅಪಾಯವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ ಇಂಗ್ಲೆಂಡಿನ ಒಪ್ಪಿಗೆಯೊಡನೆ ಹ್ಯಾನೊವರನ್ನು ಆಕ್ರಮಿಸಿಕೊಂಡ. ಇದರಿಂದ ಫ್ರಾನ್ಸಿನ ಸೈನ್ಯಗಳು ಪ್ರಷ್ಯದೊಳಗೆ ನುಗ್ಗಲು ಅಡಚಣೆಯಾಯಿತು. ಆದರೆ ದಕ್ಷಿಣದಲ್ಲಿ ಆಸ್ಟ್ರಿಯದ ಪಡೆ ಸಜ್ಜಾಗಿ ಕದನಕ್ಕೆ ನಿಂತಿತ್ತು. ಪುರ್ವದಿಂದ ರಷ್ಯನ್ ಸೈನ್ಯ ತನ್ನ ದೇಶದೊಳಕ್ಕೆ ನುಗ್ಗುವ ಭಯವೂ ಇತ್ತು. ಇವೆರಡು ಕಡೆಯಲ್ಲೂ ಶತ್ರುಗಳನ್ನು ಪ್ರಷ್ಯ ಎದುರಿಸಬೇಕಾಗಿತ್ತು. ಫ್ರಾನ್ಸಿನ ಸೈನ್ಯವನ್ನೆದುರಿಸಲು ಇಂಗ್ಲೆಂಡಿನಿಂದ ಸೈನ್ಯ ಸಹಾಯ ಬಂದಿತ್ತು.

ಯುದ್ಧದ ಮೊದಲ ಐದು ವರ್ಷ ಇಂಗ್ಲೆಂಡಿಗೂ ಪ್ರಷ್ಯಕ್ಕೂ ಅನುಕೂಲಕರ ವಾಗಿರಲಿಲ್ಲ. ಫ್ರೆಡರಿಕನ ಸಹಾಯಕ್ಕೆ ಕೊಂಚ ಸೈನ್ಯವನ್ನೂ ಅಪಾರ ಹಣವನ್ನೂ ಕಳುಹಿಸಿ, ಯುರೋಪಿನಲ್ಲೆ ಯುದ್ಧ ಮುಂದುವರಿಯುವಂತೆ ಮಾಡಿದರೆ ಫ್ರಾನ್ಸ್‌ ತನ್ನ ಸೈನ್ಯದ ಬಹುಭಾಗವನ್ನು ಯುರೋಪಿನಲ್ಲೇ ಇಟ್ಟುಕೊಳ್ಳಬೇಕಾಗುತ್ತದೆ. ಅದರ ವಸಾಹತುಗಳಿಗೆ ಸೈನ್ಯ ಕಳುಹಿಸುವ ಸ್ಥಿತಿಯಲ್ಲಿರುವುದಿಲ್ಲ. ಇದರಿಂದ ಆ ಪ್ರದೇಶಗಳಲ್ಲಿ ಬ್ರಿಟಿಷ್ ಫ್ರಾನ್ಸಿನ ಪ್ರಾಬಲ್ಯ ಮುರಿಯಬಹುದು-ಎಂಬುದು ಇಂಗ್ಲೆಂಡಿನ ಯುದ್ಧಮಂತ್ರಿ ಲಾರ್ಡ್ ಚಾಥಮನ ಹಂಚಿಕೆ. ಆದರೂ ಮೊದಲು ಶತ್ರುಗಳ ಕೈ ಮೇಲಾಗಿ ಇಂಗ್ಲೆಂಡ್ ಪ್ರಷ್ಯಗಳಿಗೆ ಗಂಭೀರ ಪರಿಸ್ಥಿತಿಯುಂಟಾಯಿತು. ಫ್ರೆಡರಿಕ್ ಕೊಲ್ಲಿನಿನಲ್ಲಿ ಸೋತು ಬೊಹಿಮಿಯವನ್ನು ಶತ್ರುಗಳಿಗೆ ಬಿಟ್ಟುಕೊಡಬೇಕಾಯಿತು. 1758-1759ರಲ್ಲಂತೂ ಪ್ರಷ್ಯದ ಸ್ಥಿತಿ ತೀರ ಹದಗೆಟ್ಟಿತು. eóÁರೆನ್ ಡಾರ್ಫ್ ಕದನದಲ್ಲಿ ಪ್ರಷ್ಯ ಗೆದ್ದಿತಾದರೂ ಅದಕ್ಕೆ ಸಂಭವಿಸಿದ ನಷ್ಟ ಅಪಾರ. ಮರುವರ್ಷ ಕ್ಯೂನೆರ್ಸ್‌ಡಾಫಿನಲ್ಲಿ ಸೋಲೇ ಕಾದಿತ್ತು. ಭಾರತದಲ್ಲಿ ಫೋರ್ಟ್ ಸೇಂಟ್ ಡೇವಿಡ್ ಫ್ರೆಂಚರ ವಶವಾದ್ದರಿಂದ ಮದರಾಸು ಇಂಗ್ಲಿಷರ ಕೈಬಿಟ್ಟುಹೋಗುವ ಸ್ಥಿತಿ ಬಂದಿತ್ತು. ಉತ್ತರ ಅಮೆರಿಕದಲ್ಲೂ ಬ್ರಿಟಿಷರ ಪರಿಸ್ಥಿತಿ ಆಶಾದಾಯಕವಾಗಿರಲಿಲ್ಲ.

ಆದರೆ ಕೊನೆಯ ಮೂರು ವರ್ಷಗಳಲ್ಲಿ ಶತ್ರುಗಳ ಬಲ ಕುಂದುತ್ತ ಬಂತು. ಪ್ಲಾಸಿ ಕದನದಲ್ಲಿ ಬ್ರಿಟಿಷರು ಬಂಗಾಳ ಗೆದ್ದುಕೊಂಡರಲ್ಲದೆ 1760ರಲ್ಲಿ ನದೆಡ ವಾಂಡಿವಾಷ್ ಕದನದಿಂದ ದಕ್ಷಿಣ ಭಾರತದಲ್ಲೂ ಫ್ರೆಂಚರ ಪ್ರಾಬಲ್ಯ ಮುರಿದುಬಿತ್ತು. ಉತ್ತರ ಅಮೆರಿಕದಲ್ಲಿ ಕರ್ನಲ್ ವುಲ್ಫ್‌ ಕ್ವಿಬೆಕ್ ಕೋಟೆಯನ್ನು ಹಿಡಿದ. ಯೂರೋಪಿನಲ್ಲಿ ಲೀಗ್ನಿಟ್ಸ್‌ ಮತ್ತು ಟೋರ್ಗಾನ್ ಕದನಗಳಲ್ಲಿ ಆಸ್ಟ್ರಿಯದ ಸೈನ್ಯವನ್ನು ಫ್ರೆಡರಿಕ್ ಸೋಲಿಸಿ ಹಿಮ್ಮೆಟ್ಟಿಸಿದ. ಇದೇ ಸಮಯಕ್ಕೆ ಸರಿಯಾಗಿ ರಷ್ಯದ ರಾಣಿ ಒಂದನೆಯ ಎಲಿಜ಼ಬೆತಳ ಮರಣ ಸಂಭವಿಸಿತು. ಅವಳ ಅನಂತರ ಸಿಂಹಾಸನವೇರಿದ ಪೀಟರ್ ದೊರೆ ಫ್ರೆಡರಿಕನ ಅಭಿಮಾನಿ. ಇದರಿಂದ ರಷ್ಯದಿಂದಲೂ ಫ್ರೆಡರಿಕನಿಗೆ ವಿರೋಧ ಅಡಗಿಹೋಯಿತು.

1763ರಲ್ಲಿ ಹ್ಯೂಬಟ್ರ್ಸ್‌ಬರ್ಗಿನಲ್ಲಿ ಪ್ರಷ್ಯಕ್ಕೂ ಆಸ್ಟ್ರಿಯಕ್ಕೂ ಒಪ್ಪಂದವಾಗಿ ಯುದ್ಧ ನಿಂತಿತು. ಸೈಲೀಷಿಯ ಪ್ರಷ್ಯಕ್ಕೆ ಸೇರಿಹೋಯಿತು. ಅದೇ ವರ್ಷ ನಡೆದ ಪ್ಯಾರಿಸ್ ಒಪ್ಪಂದದಲ್ಲಿ ಕೆನಡ ಬ್ರಿಟಿಷರದಾಯಿತು. ಭಾರತದಲ್ಲೂ ಫ್ರೆಂಚರ ಪ್ರಾಬಲ್ಯ ಕೊನೆಗೊಂಡಿತು. ಈ ಎಲ್ಲ ಪರಾಭವಗಳಿಂದ ಫ್ರಾನ್ಸಿನ ಕೀರ್ತಿಗೆ ತಟ್ಟಿದ ಕಳಂಕ ಅಷ್ಟಿಷ್ಟಲ್ಲ. ಮುಂದೆ ಜರುಗಿದ ಮಹಾಕ್ರಾಂತಿಗೆ ಈ ಅವಮಾನವೂ ಒಂದು ಪ್ರಬಲ ಕಾರಣ. ಬ್ರಿಟಿಷರಿಗಂತೂ ಆಗ ಯಾವ ಅಡಚಣೆಯೂ ಇರಲಿಲ್ಲ. ಮುಂದಿನ ವರ್ಷಗಳಲ್ಲಿ ಅದು ಮಹಾಚಕ್ರಾಧಿಪತ್ಯವೊಂದನ್ನು ಕಟ್ಟಲು ಅನುಕೂಲಕರವಾದ ವಾತಾವರಣ ಏರ್ಪಟ್ಟಂತಾಯಿತು.                                                       (ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ